ಗುರು ಗ್ರಹದ ವಾಯುಮಂಡಲ

ಗುರುಗ್ರಹದ ಮೋಡಗಳ ಸಂರಚನೆ.

ಗುರು ಗ್ರಹದ ವಾಯುಮಂಡಲವು ನಮ್ಮ ಸೌರವ್ಯೂಹದಲ್ಲಿನ ಅತ್ಯಂತ ದೊಡ್ಡ ವಾಯುಮಂಡಲವಾಗಿದೆ. ಇದು ಮುಖ್ಯವಾಗಿ ಹೆಚ್ಚು-ಕಡಿಮೆ ಸೂರ್ಯನಲ್ಲಿರುವಷ್ಟೇ ಅನುಪಾತದಲ್ಲಿ ಇರುವ ಜಲಜನಕ ಮತ್ತು ಹೀಲಿಯಂ ಧಾತುಗಳಿಂದಾಗಿದೆ.ಬೇರೆ ರಸಾಯನಿಕಗಳಾದ ಮೀಥೇನ್,ಅಮ್ಮೋನಿಯ,ಹೈಡ್ರೊಜೆನ್ ಸಲ್ಫೈಡ್ ಮತ್ತು ನೀರು ಕಡಿಮೆ ಪ್ರಮಾಣದಲ್ಲಿವೆ. ವಾಯುಮಂಡಲದ ತೀರಾ ಒಳಗಡೆ ನೀರಿದೆಯೆಂದು ಊಹಿಸಲಾಗಿದ್ದರೂ, ನೇರವಾಗಿ ಪರೀಕ್ಷೆಗಳಿಂದ ಅಳೆದಿರುವ ನೀರಿನ ಪರಿಮಾಣ ತುಂಬಾ ಕಡಿಮೆಯೆ. ಗುರುವಿನ ವಾಯುಮಂಡಲದಲ್ಲಿರುವ ಆಮ್ಲಜನಕ,ಸಾರಜನಕ,ಗಂಧಕ ಮತ್ತು ನೋಬಲ್ ಗ್ಯಾಸ್ ಗಳ ಪ್ರಮಾಣವು ಸೌರ ಪ್ರಮಾಣಗಳಿಗಿಂತ ಮೂರುಪಟ್ಟು ಹೆಚ್ಚು.ಗುರು ಗ್ರಹದ ವಾಯುಮಂಡಲವು ಯಾವುದೇ ನಿಶ್ಚಿತ ಗಡಿಯಿಲ್ಲದೇ ಮೇಲಿನ ವಾಯುರೂಪದಿಂದ ಒಳಗಿನ ದ್ರವರೂಪಕ್ಕೆ ನಿಧಾನವಾಗಿ ಬದಲಾಗುತ್ತದೆ.ಗ್ರಹದ ಒಳಭಾಗದಿಂದ ಮೇಲಕ್ಕೆ ವಾತಾವರಣವನ್ನು ಟ್ರೋಪೊಸ್ಫಿಯರ್, ಸ್ಟ್ರಾಟೋಸ್ಫಿಯರ್,ಥರ್ಮೋಸ್ಫಿಯರ್ ಮತ್ತು ಎಗ್ಸೋಸ್ಫಿಯರ್ ಎಂಬ ವಲಯಗಳನ್ನಾಗಿ ವಿಭಾಗಿಸಬಹುದು. ಪ್ರತಿಯೊಂದು ವಲಯವೂ ತನ್ನದೇ ಆದ ಉಷ್ಣತೆಯ ಏರಿಳಿತವನ್ನು ಹೊಂದಿದೆ. ಅತ್ಯಂತ ಕಳಗಿನ ವಲಯವಾದ ಟ್ರೋಪೊಸ್ಫಿಯರ್, ಅಮ್ಮೋನಿಯಾ, ಅಮ್ಮೋನಿಯಮ್-ಹೈಡ್ರೊಸಲ್ಫೈಡ್ ಮತ್ತು ನೀರಿನಿಂದಾದ ಕ್ಲಿಷ್ಟವಾದ ಮೋಡ-ಮಂಜುಗಳ ಪದರಗಳಿಂದ ಕೂಡಿದೆ.ಗುರುಗ್ರಹದ ಮೇಲೆ ಕಾಣುವ ಅಮ್ಮೊನಿಯಾ ಮೋಡಗಳು ಗ್ರಹದ ಭೂಮಧ್ಯರೇಖೆಗೆ ಸಮನಾಂತರವಾಗಿ ೧೨ ಪಟ್ಟಿಗಳಂತೆ ಗೋಚರಿಸುತ್ತವೆ. ಈ ಪಟ್ಟಿಗಳು ಗುರುವಿನ ವಾತಾವರಣದ ಶಕ್ತಿಯುತವಾದ "ಜೆಟ್" ಗಳೆಂದು ಕರೆಯಲ್ಪಡುವ ಬಲವಾಗಿ ಬೀಸುವ ಗಾಳಿಗಳಿಂದ ಕೂಡಿರುತ್ತವೆ. ಈ ಪಟ್ಟಿಗಳು ಒಂದರ ನಂತರ ಇನ್ನೊಂದರಂತೆ ಗಾಢವರ್ಣ ಮತ್ತು ತಿಳಿವರ್ಣಗಳಿಂದ ಕೂಡಿವೆ. ಗಾಢವರ್ಣದ ಪಟ್ಟಿಗಳನ್ನು "ಬೆಲ್ಟ್" ಗಳೆಂದೂ, ತಿಳಿವರ್ಣದ ಪಟ್ಟಿಗಳನ್ನು "ಝೋನ್" ಗಳೆಂದೂ ಕರಯುತ್ತಾರೆ. ಬೆಲ್ಟ್ ಗಳಿಗಿಂತ ತಣ್ಣಗಿರುವ ಝೋನ್ ಗಳು ವಾತಾವರಣದ ಗಾಳಿಯ ಉಬ್ಬಿದ ಭಾಗ(ಅಥವಾ ಉಬ್ಬಿ ಮೇಲೆ ಬರುತ್ತಿರುವ ಗಾಳಿ) ಮತ್ತು ಬೆಲ್ಟ್ ಗಳು ಅಧೋಮುಖವಾಗಿ ಚಲಿಸುತ್ತಿರುವ (ಕೆಳಗಿಳಿಯುತ್ತಿರುವ)ಗಾಳಿಯ ಭಾಗ. ಝೋನ್ ಗಳ ತಿಳಿವರ್ಣಕ್ಕೆ ಘನೀಭೂತವಾದ ಅಮ್ಮೊನಿಯವು(ಅಮ್ಮೊನಿಯಾ ಐಸ್)ಕಾರಣವೆಂದು ನಂಬಲಾಗಿದೆ ಆದರೆ ಬೆಲ್ಟ್ ಗಳ ಗಾಢವರ್ಣಕ್ಕೆ ಕಾರಣವೇನೆಂದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಗುರುಗ್ರಹದ ಈ ಗಾಢ-ತಿಳಿವರ್ಣಗಳ ಪಟ್ಟಿಗಳಂತೆ ಕಾಣುವ ಈ ರಚನೆಗಳ ಉಗಮವೂ ಸರಿಯಾಗಿ ತಿಳಿದಿಲ್ಲ. ಆದರೂ ಈ ರಚನೆಗಳ ಉಗಮವನ್ನು ಅರ್ಥೈಸುವ ಪ್ರಯತ್ನಮಾಡುವ ಎರಡು ವಾದಗಳಿವೆ.ಮೊದಲಯನೆಯದಾದ "ಶಾಲೋ ಮೋಡೆಲ್" ಎಂದು ಕರೆಯಲ್ಪಡುವ ವಾದದ ಪ್ರಕಾರ, ಈ ಪಟ್ಟಿಗಳ ರಚನೆಯು ಗುರುವಿನ ಸ್ಥಿರವಾದ ಗರ್ಭದ(ಅಂತರ್ಯದ) ಮೇಲೆ ತೋರುವ ವಾತಾವರಣದ ರಚನೆಗಳು. ಎರಡನೆಯ "ಡೀಪ್ ಮೋಡೆಲ್" ವಾದದ ಪ್ರಕಾರ ಈ ರಚನೆಗಳು ಗುರುವಿನ ಸ್ಥಿರವಲ್ಲದ ಗರ್ಭದೊಳಗೆ ಉಂಟಾಗುತ್ತಿರುವ ಶುದ್ಢ ಜಲಜನಕದ ಚಲನೆಯು ವಾತಾವರಣದ ಮೇಲೆ ಮಾಡುತ್ತಿರುವ ಅಲ್ಲೋಲಕಲ್ಲೋಲದ ವ್ಯಕ್ತಸ್ವರೂಪಗಳು.

ಗುರುಗ್ರಹದ ವಾತಾವರಣವು ಅನೇಕ ರೀತಿಯ ಅಸಾಧಾರಣ ವಿದ್ಯಮಾನಗಳಿಂದ ಕೂಡಿದೆ. ಗಾಢ ಮತ್ತು ತಿಳಿವರ್ಣಗಳ ಪಟ್ಟಿಗಳಲ್ಲಿ ಉಂಟಾಗುವ ಸ್ಥಿತ್ಯಂತರಗಳಲ್ಲದೇ, ತಮ್ಮ ಕೇಂದ್ರಗಳ ಸುತ್ತ ವೇಗವಾಗಿ ಗಿರಿಗಿರನೆ ಪ್ರದಕ್ಷಿಣಾಕರವಾಗಿ ಮತ್ತು ಅಪ್ರದಕ್ಷಿಣಾಕರವಾಗಿ ತಿರುಗುವ ಚಂಡಮಾರುತಗಳು, ಗುಡುಗು ಮತ್ತು ಮಿಂಚುಗಳು ನಿರಂತರವಾಗಿ ಆಗುತ್ತಿರುತ್ತವೆ. ಗುರುಗ್ರಹದ ಮೇಲಿನ ಚಂಡಮಾರುತಗಳು ಕೆಂಪು,ಬಿಳಿ ಮತ್ತು ಕಂದು ಬಣ್ಣದ ದೊಡ್ಡ ಚುಕ್ಕೆಗಳಾಗಿ ಕಂಡುಬರುತ್ತವೆ. ಈ ಚುಕ್ಕೆಗಳಲ್ಲಿ ಎರಡು ಅತ್ಯಂತ ದೊಡ್ದವು "ಗ್ರೇಟ್ ರೆಡ್ ಸ್ಪಾಟ್" (ದೊಡ್ಡ ಕೆಂಪು ಚುಕ್ಕೆ) ಮತ್ತು "ಓವಲ್ BA". ಇವೆರಡು ಮತ್ತು ಇನ್ನಿತರ ಬಹುತೇಕ ದೊಡ್ದ ಚಂಡಮಾರುತಗಳು ಅಪ್ರದಕ್ಷಿಣಾಕಾರವಾಗಿ ತಮ್ಮ ಕೇಂದ್ರಗಳ ಸುತ್ತ ತಿರುಗುತ್ತವೆ.ಇತರ ಸಣ್ಣ ಚಂಡಮಾರುತಗಳು ಬಿಳಿ ಚುಕ್ಕೆಗಳಾಗಿ ಕಾಣುತ್ತವೆ. ಈ ಚಂಡಮಾರುತಗಳ ಕೇಂದ್ರದ ಸುಳಿಗಳು ಹಲವು ನೂರು ಕಿಲೋಮೀಟರುಗಳಷ್ಟು ಆಳವಾಗಿರುತ್ತವೆ.ಗುರುಗ್ರಹದ ದಕ್ಷಿಣ ಗೋಳಾರ್ಧದಲ್ಲಿರುವ ಗ್ರೇಟ್ ರೆಡ್ ಸ್ಪಾಟ್ ಅಥವಾ GRS, ನಮ್ಮ ಸೌರವ್ಯೂಹದಲ್ಲೇ ಅತ್ಯಂತ ದೊಡ್ದ ಚಂಡಮಾರುತ.ನಮ್ಮ ಭುವಿಯ ಗಾತ್ರದ ಹಲವು ಗ್ರಹಗಳನ್ನು ಅಡಗಿಸಿಟ್ಟುಕೊಳ್ಳುವಷ್ಟು ದೊಡ್ಡ ಗಾತ್ರವುಳ್ಳದ್ದು.ಇದು ಸುಮಾರು ೩೦೦ ವರ್ಷಗಳಿಂದ ಬೀಸುತ್ತಲೇ ಇದೆ. GRS ಗೆ ದಕ್ಷಿಣದಲ್ಲಿರುವ ಓವಲ್ BA ಇನ್ನೊಂದು ದೈತ್ಯ ಚಂಡಮಾರುತ ಆದರೆ GRS ಗೆ ಹೋಲಿಸಿದರೆ ಇದು ಅದರ ಮೂರನೆಯ ಒಂದರಷ್ಟಿದೆ. ಈ ಚಂಡಮಾರುತವು ೨೦೦೦ನೆಯ ಇಸವಿಯಲ್ಲಿ ಮೂರು ಬಿಳಿ ವರ್ಣದ ಚುಕ್ಕೆಗಳಂತೆ ಕಾಣುವ ಸಣ್ಣ ಚಂಡಮಾರುತಗಳ ಸಂಗಮದಿಂದ ರೂಪುಗೊಂಡಿತು. ಗುರುಗ್ರಹದಲ್ಲಿ ಸದಾಕಾಲವೂ ಭೀಕರ ಮಿಂಚಿನಿಂದ ಕೂಡಿದ ಬಲವಾದ ಬಿರುಗಾಳಿಗಳು ಮತ್ತು ಚಂಡಮಾರುತಗಳು ತಾಂಡವವಾಡುತ್ತಿರುತ್ತವೆ. ನೀರಿನ ಆವಿಯಾಗುವಿಕೆ ಮತ್ತು ಘನೀಕರಣದ ಪ್ರಕ್ರಿಯೆಯಿಂದುಂಟಾಗುವ ಶೀತಲ ವಾಯುವಿನ ಬಲವಾದ ಪ್ರವಾಹವು ಶಕ್ತಿಯುತವಾದ ಬಿರುಗಾಳಿಗಳನ್ನೂ, ಚಂಡಮಾರುತಗಳನ್ನೂ ಎಬ್ಬಿಸುತ್ತದೆ. ಹೀಗೆ ಆವಿಯಾಗಿ ಮೇಲ್ಬರುವ ಹವೆಯ ಭಾಗಗಳಲ್ಲಿ ವಾಯುವು ಊರ್ಧ್ವಗಾಮಿಯಾಗಿರುತ್ತದೆ. ಇದು ದಟ್ಟವಾಗಿ ಬೆಳ್ಳಗೆ ಹೊಳೆಯುವ ಮೋಡಗಳನ್ನುಂಟುಮಾಡುತ್ತದೆ ಅದ್ದರಿಂದ ಈ ವಲಯಗಳು ತಿಳಿವರ್ಣದ್ದಾಗಿರುತ್ತವೆ. ಈ ಭಾಗಗಳನ್ನೇ ಝೋನ್ ಗಳೆಂದು ಕರೆಯುವುದು.ಬಿರುಗಾಳಿಗಳು ಮತ್ತು ಚಂಡಮಾರುತಗಳು ಝೋನ್ ಗಳ ಪಕ್ಕದಲ್ಲಿರುವ ಗಾಢ ವರ್ಣದ "ಬೆಲ್ಟ್" ವಲಯಗಳಲ್ಲಿರುತ್ತವೆ. ಸಾಧಾರಣವಾಗಿ ಗುರುವಿನ ಮಿಂಚುಗಳ ಶಕ್ತಿ ಮತ್ತು ತೀವ್ರತೆ ಭೂಮಿಯಲ್ಲಿನ ಮಿಂಚುಗಳಷ್ಟೇ ಇದ್ದರೂ ಕೆಲವೊಮ್ಮೆ ಅನೇಕಪಟ್ಟು ಹೆಚ್ಚು ತೀವ್ರತೆ ಮತ್ತು ಬಲದಿಂದ ಕೂಡಿದ ಮಿಂಚುಗಳೂ ಉಂಟಾಗುತ್ತವೆ.

Other Languages