ಆಸ್ತಿ
English: Property

ಒಡೆತನದ ಹಕ್ಕುಗಳಿಗೆ ಒಳಪಡಿಸಬಹುದಾದ ಹಾಗೂ ಆರ್ಥಿಕ ಮೌಲ್ಯವುಳ್ಳ ಪದಾರ್ಥ. ಒಂದು ಪದಾರ್ಥಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ನಡುವೆ ಏರ್ಪಟ್ಟಿರುವ ಸಂಬಂಧಗಳ ವಿನ್ಯಾಸವೇ ಸ್ವತ್ತು. ಇಂಥ ಸಂಬಂಧಗಳ ವಿನ್ಯಾಸ ಸರ್ಕಾರದಿಂದ ಅಂಗೀಕೃತವಾಗಿರಬೇಕು, ಸ್ಥಾಪಿಸಲ್ಪಟ್ಟಿರಬೇಕು.


ಆಸ್ತಿ ಮತ್ತು ಸ್ವತ್ತು ಎಂಬ ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತಿದ್ದರೂ ಶಾಸ್ತ್ರೀಯ ವಿವೇಚನೆಗಾಗಿ ಇಲ್ಲಿ ಇವೆರಡಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬೇಕು. ಆಸ್ತಿ ಎಂಬ ಪದವನ್ನು ಮೊದಲಿನ ಸಂಕುಚಿತ ಅರ್ಥದಲ್ಲೂ ಸ್ವತ್ತು ಎಂಬ ಪದವನ್ನು ಎರಡನೆಯ ವಿಶಾಲ ಅರ್ಥದಲ್ಲೂ ಇಲ್ಲಿ ಬಳಸಲು ಪ್ರಯತ್ನಿಸಿದೆ. ಅನೇಕ ಸಂದರ್ಭಗಳಲ್ಲಿ ಇವೆರಡನ್ನೂ ಪ್ರತ್ಯೇಕಿಸುವುದೂ ಕಷ್ಟವಾಗುತ್ತದೆ. ಸ್ಥಿತಿವಂತ ಎಂಬ ಪದವನ್ನು ಜನ ಬಳಸುವಾಗ ಒಬ್ಬಾತನ ಸ್ವಾಮ್ಯಕ್ಕೊಳಪಟ್ಟಿರುವ ಎಲ್ಲ ಬಗೆಯ ಮೂರ್ತ ಆಸ್ತಿಗಳನ್ನೇ ಅಲ್ಲದೆ ಅಮೂರ್ತವಾದ ಎಲ್ಲ ಬಗೆಯ ಹಕ್ಕುಗಳನ್ನೂ ಗಮನದಲ್ಲಿಟ್ಟು ಕೊಂಡು ಈ ಮಾತು ಹೇಳುವುದು ವಾಡಿಕೆಯಾಗಿದೆ.[೧]


ಕಾಯಿದೆಯ ದೃಷ್ಟಿಯಲ್ಲಿ ಆಸ್ತಿ ಹಾಗೂ ಸ್ವತ್ತಿನ ವಿವರಣೆಯನ್ನು ಇಲ್ಲಿ ಮೊದಲ ಭಾಗದಲ್ಲಿ ಕೊಡಲಾಗಿದೆ. ಕೊನೆಯ ಭಾಗದಲ್ಲಿ ಸಮಾಜದ ದೃಷ್ಟಿಯಿಂದ ಸ್ವತ್ತಿನ ಕಲ್ಪನೆಯನ್ನು ವಿವೇಚಿಸಿದೆ. ಒಂದು ಉದ್ಯಮದಲ್ಲಿ ತೊಡಗಿಸಿದ ಆಸ್ತಿಗಳನ್ನು ಕುರಿತ ವಿವೇಚನೆಯನ್ನು ಲೇಖನದಲ್ಲಿ (ಮುಂದೆ) ಕೊಟ್ಟಿದೆ.

ಅಸ್ತಿ ಎಂದರೆ ಇದೆ ಎಂದರ್ಥ. ಅಸ್ತಿತ್ವದಲ್ಲಿರುವುದು ಯಾವುದೋ ಅದು ಆಸ್ತಿ. ಸ್ವಂತದ್ದು ಯಾವುದೋ ಅದು ಸ್ವತ್ತು. ಪ್ರಾಪರ್ಟಿ ಎಂಬ ಇಂಗ್ಲಿಷ್ ಪದ ಪ್ರೊಪ್ರೈಟಸ್, ಪ್ರೊಪ್ರಿಯಸ್ ಎಂಬ ಲ್ಯಾಟಿನ್ ಪದಗಳಿಂದ ಬಂದಿದೆ. ಪ್ರೊಪ್ರಿಯಸ್ ಎಂಬ ಪದದ ಅರ್ಥ ಸ್ವಂತದ್ದು ಎಂದು, ಸ್ವತ್ತು ಎಂಬುದು ಪ್ರಾಪರ್ಟಿ ಎಂಬ ಮಾತಿಗೆ ಬಹು ಸಮೀಪವಾಗಿದೆ.

ಅಸ್ತಿತ್ವದಲ್ಲಿರುವುದೆಲ್ಲ ಆಸ್ತಿ ಎಂಬುದಾದರೆ, ಅಸ್ತಿತ್ವದಲ್ಲಿರುವುದು ಯಾವುದು-ಎಂಬ ಪ್ರಶ್ನೆ ಏಳುತ್ತದೆ. ಕಣ್ಣಿಗೆ ಕಾಣುವ, ಕೈಯಿಂದ ಮುಟ್ಟಿ ಅನುಭವಿಸುವ ವಸ್ತುಗಳು ಮಾತ್ರ ಅಸ್ತಿತ್ವದಲ್ಲಿವೆಯೆ ? ಜಡವಸ್ತುಗಳೆಲ್ಲ, ವಾಸ್ತವವಾಗಿ ಯಾವುದನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅವುಗಳ ಮೇಲೆ ಒಡೆತನವನ್ನು ಸ್ಥಾಪಿಸಲು ಸಾಧ್ಯವಾಗುವುವೋ ಆ ವಸ್ತು ಅಥವಾ ಸ್ವತ್ತುಗಳೆಲ್ಲ, ಅಸ್ತಿತ್ವದಲ್ಲಿವೆ ಎಂಬ ವಿಚಾರವನ್ನು ಗ್ರಹಿಸುವುದು ಕಷ್ಟವಲ್ಲ. ಭೂಮಿ, ಮನೆ, ಧನ, ಧಾನ್ಯ, ಪಶು, ಪಕ್ಷಿ ಮುಂತಾದುವು ಆಸ್ತಿಗಳೆಂದು ತಿಳಿಯುವುದಕ್ಕೆ ಕಷ್ಟವಾಗುವುದಿಲ್ಲ. ಆದರೆ, ಕಣ್ಣಿಗೆ ಕಾಣದ ಆಸ್ತಿಗಳೂ ಆಸ್ತಿಗಳೆ ? ಎಲ್ಲ ಹಕ್ಕುಗಳೂ ಗ್ರಂಥಕರ್ತನಿಗೆ ಸೇರಿವೆ ಎಂದು ಒಬ್ಬ ಗ್ರಂಥಕರ್ತ ತನ್ನ ಪುಸ್ತಕದಲ್ಲಿ ಸೂಚಿಸಿದಾಗ, ಯಾವುದರ ಮೇಲಿರುವ ಹಕ್ಕುಗಳು ?-ಎಂಬುದು ಪ್ರಶ್ನೆ. ಅಚ್ಚಾದ ಗ್ರಂಥದ ಆ ಒಂದು ಪ್ರತಿಯ ಮೇಲಿನ ಹಕ್ಕು ಅದಾಗಿದ್ದರೆ, ಅದನ್ನು ಕ್ರಯ ಕೊಟ್ಟು ಪಡೆದವನು ಆ ಹಕ್ಕನ್ನೂ ಕೊಂಡಂತಾಗುತ್ತದೆ. ಆದರೆ, ಒಂದು ಪ್ರತಿಯನ್ನು ಕ್ರಯಕ್ಕೆ ಕೊಳ್ಳುವುದರಿಂದ ಗ್ರಂಥಕರ್ತನ ಹಕ್ಕುಗಳಿಗೆ ಲೋಪ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಮಾತು. ಎಂದಮೇಲೆ, ಗ್ರಂಥಕರ್ತನ ಆ ‘ಆಸ್ತಿ’ ಕಣ್ಣಿಗೆ ಕಾಣುವ ಕೈಯಿಂದ ಗ್ರಹಿಸುವ ಗ್ರಂಥಕ್ಕಿಂತಲೂ ಬೇರೆಯೇ ಆಗಿದೆ (ಗ್ರಂಥಸ್ವಾಮ್ಯ). ಅದೂ ಆಸ್ತಿಯೇ ಎಂದಂತಾಯಿತು. ಏಕೆಂದರೆ, ಆ ಆಸ್ತಿಯ ಮೇಲೆ ಗ್ರಂಥಕರ್ತನಿಗೆ ಸ್ವಾಮ್ಯವಿದೆ. ಎಂದರೆ ಆಸ್ತಿ ಕೇವಲ ಜಡವಸ್ತುಗಳಿಗೇ ಪರಿಮಿತವಾಗಿಲ್ಲ.

ಬಹುಕಾಲದವರೆಗೆ ಒಂದು ಸ್ಥಳದಲ್ಲಿ ವ್ಯಾಪಾರ ನಡೆಸುತ್ತಿರುವ ಒಂದು ಅಂಗಡಿ ಮಾಲೀಕ ತನ್ನ ಸರಕು ಹಾಗೂ ತನ್ನ ಅಂಗಡಿಯ ಬಗ್ಗೆ ಒಂದು ಬಗೆಯ ಸದ್ಭಾವನೆ ಮತ್ತು ಖ್ಯಾತಿ ಪಡೆಯುತ್ತಾನೆ. ಆ ಖ್ಯಾತಿ ಅವನ ಅಂಗಡಿಯ ಅವಿಭಾಜ್ಯ ಭಾಗವಾಗುತ್ತದೆ. ಇದನ್ನು ಸುನಾಮ (ಗುಡ್ವಿಲ್) ಎನ್ನುತ್ತಾರೆ. ಒಂದು ವೇಳೆ ಆ ಅಂಗಡಿಯ ಮಾಲೀಕ ತನ್ನ ಅಂಗಡಿಯನ್ನು ಮಾರಿದರೆ, ಅದರೊಡನೆ ಅದರ ಸುನಾಮವನ್ನೂ ಮಾರುತ್ತಾನೆ. ಆಗ ಅದು ಆಸ್ತಿ ಎಂಬ ಹೆಸರಿಗೆ ಅರ್ಹವಾಗುತ್ತದೆ. ಅದಕ್ಕೂ ಬೆಲೆಯಿದೆ.

ಒಬ್ಬಾತನಿಗೆ ಭೂಮಿ ಮನೆ ಮುಂತಾದ ಸ್ಥಾವರ ಆಸ್ತಿಗಳಿಲ್ಲದಿದ್ದರೂ ಕಂಪನಿಗಳಲ್ಲಿ ಷೇರುಗಳ ರೂಪದಲ್ಲಿ ಅಥವಾ ಜನರಿಂದ ಬರಬೇಕಾದ ಸಾಲದ ರೂಪದಲ್ಲಿ ಆಸ್ತಿಯಿರಬಹುದು. ಷೇರು ಮತ್ತು ಸಾಲದ ಈ ಆಸ್ತಿಯ ಮೇಲೆ ಪ್ರಸ್ತಾಪಿಸಿದ ಭೂಮಿ ಅಥವಾ ಮನೆ ಮುಂತಾದ ಸ್ಥಾವರ ಆಸ್ತಿಗಿಂತ ಬೇರೆಯಾಗಿದೆ. ಹಾಗೆಯೇ ಗ್ರಂಥಸ್ವಾಮ್ಯ ಸುನಾಮಕ್ಕಿಂತ ಭಿನ್ನವಾಗಿದೆ. ಒಬ್ಬಾತ ಒಂದು ಕಂಪನಿಯ ಇಂತಿಷ್ಟು ಸಾವಿರ ರೂಪಾಯಿ ಸಾಲ ಬರುವುದಿದೆ-ಎಂದಾಗ ಆ ಷೇರು ಅಥವಾ ಸಾಲಪತ್ರಗಳೇ ಆಸ್ತಿ ಎಂಬ ಅಭಿಪ್ರಾಯವಲ್ಲ. ಅವು ಬರಿಯ ಕಾಗದ ಪತ್ರ. ಯಾರ ಹೆಸರಿನಲ್ಲಿ ಷೇರು ಅಥವಾ ಸಾಲಪತ್ರಗಳಿವೆಯೋ ಅವರಿಗೆ ಅಷ್ಟು ಹಣವನ್ನು ವಸೂಲು ಮಾಡಿಕೊಂಡು ಪಡೆಯುವ ಹಕ್ಕು ಇದೆ ಎಂದು ಅರ್ಥವಾಗುತ್ತದೆ. ಇಂಥ ಹಕ್ಕುಗಳೂ ಆಸ್ತಿಗಳೇ.

ಈ ಮೇಲೆ ಗಮನಿಸಿದ ಆಸ್ತಿಗಳಲ್ಲದೆ, ಇನ್ನೊಂದು ಬಗೆಯ ಆಸ್ತಿಯೂ ಅದರಲ್ಲಿರಬಹುದು. ಇದಕ್ಕೆ ವಿದ್ಯುಚ್ಛಕ್ತಿ ಒಂದು ಉದಾಹರಣೆ. ಕೆಲವು ಕಂಪನಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿ ನಗರ ಸಭೆಗಳಿಗೂ, ಗಿರಣಿಗಳಿಗೂ, ಕಾರ್ಖಾನೆಗಳಿಗೂ ಮಾರುತ್ತವೆ. ಆ ಕಂಪನಿಗಳು ಉತ್ಪಾದಿಸುವ ವಿದ್ಯುಚ್ಛಕ್ತಿಯೂ ಒಂದು ಆಸ್ತಿ. ಅದು ಭೂಮಿಯಂತೆ ಭೌತಿಕವಾದ ಸ್ಥಾವರವಲ್ಲ. ಗ್ರಂಥಕರ್ತನ ಗ್ರಂಥಸ್ವಾಮ್ಯ, ಅಂಗಡಿಯ ಸುನಾಮ, ಷೇರುಪತ್ರ ಮತ್ತು ಬಾಂಡುಗಳಂತೆ ಕೇವಲ ಹಕ್ಕುಗಳ ಸಂದಾಯವಲ್ಲ. ಅದು ಕಣ್ಣಿಗೆ ಕಾಣುವುದಿಲ್ಲ. ಆದರೂ ಅದು ಕೇವಲ ಕಾಲ್ಪನಿಕ ಹಕ್ಕುದಾರಿಕೆಯಲ್ಲ. ಭೂಮಿಯಂತೆ ಜಡವಲ್ಲ. ಅದರದು ಶಕ್ತಿರೂಪ. ಅಸ್ತಿತ್ವದಲ್ಲಿ ಇರುವುದೆಲ್ಲ ಆಸ್ತಿಯೆಂಬುದಾದರೆ, ವಿದ್ಯುಚ್ಛಕ್ತಿಯೂ ಆಸ್ತಿಯೇ. ಕೆಲವರನ್ನು ಮಾನಧನರು ತಪೋಧನರು ಎಂದು ಕರೆಯುವ ವಾಡಿಕೆಯುಂಟು. ಒಬ್ಬ ವ್ಯಕ್ತಿಯ ಮಾನವೂ ಧನವಾಗಿರಬಲ್ಲದು. ಆ ಧನವನ್ನು ಅಪಹರಿಸುವ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಯಾರಾದರೂ ಇನ್ನೊಬ್ಬರ ಮಾನವನ್ನು ಅಪಹರಿಸಿದರೆ, ಅದನ್ನು ‘ಅಪಮಾನ’ ಎಂದು ಶಾಸನದ ಭಾಷೆಯಲ್ಲಿ ಕರೆಯುತ್ತಾರೆ. ಇದು ಆಲಂಕಾರಿಕವಾಗಿ ಈಗ ತೋರಿದರೂ ಇದು ನಿಜವಾಗಿ ಆಸ್ತಿಯೇ. ಆಸ್ತಿ ಎಂದು ನಾವು ಕರೆಯುವುದನ್ನು ಸಂಸ್ಕೃತದಲ್ಲಿ ಧನ, ದ್ರವ್ಯ, ವಿತ್ತ, ಅರ್ಥ-ಎಂದು ಕರೆಯುತ್ತಾರೆ. ಆಸ್ತಿ ಎಂಬ ಮಾತು ಇತ್ತೀಚೆಗೆ ರೂಢಿಯಿಂದ ಪ್ರಚಾರದಲ್ಲಿದೆ.

ಪರಿವಿಡಿ

Other Languages
Afrikaans: Eiendom
Ænglisc: Ǣht
العربية: ملكية شخصية
asturianu: Propiedá
azərbaycanca: Əmlak
беларуская: Маёмасць
български: Имот
brezhoneg: Perc'henniezh
کوردی: مڵک
čeština: Majetek
Cymraeg: Eiddo
Deutsch: Eigentum
English: Property
Esperanto: Posedo
español: Propiedad
eesti: Omand
فارسی: مال
français: Propriété
galego: Propiedade
עברית: רכוש
हिन्दी: सम्पत्ति
Bahasa Indonesia: Properti
íslenska: Eignarréttur
Kabɩyɛ: Ñɩm
한국어: 재산권
Lëtzebuergesch: Proprietéit
lietuvių: Nuosavybė
latviešu: Īpašums
македонски: Сопственост
Nederlands: Eigendom
occitan: Proprietat
ਪੰਜਾਬੀ: ਸੰਪੱਤੀ
polski: Majątek
română: Proprietate
русский: Имущество
sicilianu: Pussidenti
Scots: Property
srpskohrvatski / српскохрватски: Pravo svojine
Simple English: Property
slovenščina: Stvar
српски / srpski: Pravo svojine
svenska: Egendom
తెలుగు: ఆస్తి
татарча/tatarça: Милек
українська: Майно
اردو: جائیداد
isiXhosa: Iimpawu
ייִדיש: אייגנטום
中文: 財產
粵語: 財產